ನಾಕ್ಸ್, ಜಾನ್
ಸು. 1514-1572. ಸ್ಕಾಟ್ಲೆಂಡಿನ ಧರ್ಮಸುಧಾರಕ, ಧರ್ಮಸುಧಾರಣಾ ಚಳವಳಿಯ ಇತಿಹಾಸಕಾರ. ಈತನ ಜೀವನಕ್ಕೆ ಸಂಬಂಧಿಸಿದಂತೆ 1540ಕ್ಕೆ ಹಿಂದಿನ ವಿವರಗಳು ತಿಳಿದಿಲ್ಲ. ಇವನು ಪೂರ್ವ ಲೋಥಿಯನ್ನಿನ ಹ್ಯಾಡಿಂಗ್ಟನ್ನಿನ ಹತ್ತಿರ ಜನಿಸಿದ. ಇವನ ತಾಯಿ ಸಿಂಕ್ಲೇರ್, ತಂದೆ ವಿಲಿಯಮ್. ಇವನ ತಂದೆತಾತಂದಿರು ಫ್ಲಾಡನ್ ಕದನದಲ್ಲಿ ಭಾಗವಹಿಸಿದ್ದರೆಂದು ಕಾಣುತ್ತದೆ. ಈತ ಬಹುಶಃ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದಲ್ಲಿ ಧಾರ್ಮಿಕ ಶಿಕ್ಷಣ ಪಡೆದು ಪುರೋಹಿತನಾದ. ಜಾರ್ಜ್ ವಿಷಾರ್ಡನ ಪ್ರಭಾವದಿಂದ ಕ್ರೈಸ್ತ ಧರ್ಮ ಸುಧಾರಣಾ ಚಳವಳಿಯಲ್ಲಿ ಆಸಕ್ತಿ ತಳೆದ. ವಿಷಾರ್ಟನನ್ನು ಪಾಷಂಡಿಯೆಂದು ಜೀವಸಹಿತ ಸುಡಲಾಯಿತು. ವಿಷಾರ್ಟನಲ್ಲಿ ಗೌರವಭಾವ ತಳೆದಿದ್ದು ಅವನ ಸಖ್ಯ ಬೆಳೆಸಿದ್ದ ನಾಕ್ಸನ ಜೀವಕ್ಕೂ ಅಪಾಯವಿತ್ತು. ಇವನು ಶಿಷ್ಯರೊಂದಿಗೆ ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದ. ಈತ ಸೇಂಟ್ ಆಂಡ್ರ್ಯೂಸಿನಲ್ಲಿ ಮೂರು ತಿಂಗಳ ಕಾಲ ಇರಬೇಕಾಗಿ ಬಂತು. ಆ ವೇಳೆಯಲ್ಲಿ ಇವನ ಮನಸ್ಸು ಸಂಪೂರ್ಣವಾಗಿ ಸುಧಾರಣಾ ಚಳವಳಿಯ ಕಡೆಗೆ ಒಲಿಯಿತು. ಇವನು ಪ್ರಾಟೆಸ್ಟಂಟ್ ಧರ್ಮ ಬೋಧಕನಾಗಬೇಕೆಂದು ಇವನ ಅನುಯಾಯಿಗಳು ಒತ್ತಾಯಿಸಿದರು. ಸ್ಕಾಟ್ಲೆಂಡಿನಲ್ಲಿ ಬಹಿಷ್ಕøತವಾಗಿದ್ದ ಆ ಧರ್ಮವನ್ನು ಬೋಧಿಸುವುದು ಎದೆಗಾರಿಕೆಯ ವಿಚಾರವಾಗಿತ್ತು. ಕೊನೆಗೂ ಇವನು ಒಪ್ಪಿಕೊಂಡ. ಈ ಕಾರ್ಯಕ್ಕೆ ದೇವರಿಂದ ನಿಯೋಜಿತನಾದ ವ್ಯಕ್ತಿ ತಾನೆಂದು ನಂಬಿ ಮನೋವಾಕ್ಕಾಯಗಳನ್ನು ಆ ಕೆಲಸಕ್ಕೆ ಅರ್ಪಿಸಿಕೊಂಡ.				(ವಿ.ಕೆ.)

  	ಧರ್ಮಸುಧಾರಣಾವಾದಿಗಳಿಗೆ ಸರ್ಕಾರದ ಕಿರುಕುಳ ಮುಂದುವರಿದಿತ್ತು. ಅವರು ಇಂಗ್ಲೆಂಡಿನ ರಕ್ಷಣೆ ಬೇಡಿದ್ದರು. ಸ್ಕಾಟ್ಲೆಂಡಿನ ಗವರ್ನರ್ ಫ್ರಾನ್ಸಿನ ನೆರವು ಕೋರಿದ್ದ. ಕೊನೆಗೆ ಫ್ರೆಂಚರು ಬಂದು (1547), ಸುಧಾರಣಾವಾದಿಗಳ ರಕ್ಷಣೆಯ ನೆಲೆಯಾಗಿದ್ದ ಸೇಂಟ್ ಆಂಡ್ರ್ಯೂಸ್ ಕೋಟೆಯನ್ನು ಉಡಾಯಿಸಿದರು. ಕೋಟೆಯೊಳಗೆ ಪ್ಲೇಗು ಜಾಡ್ಯ ಹಬ್ಬಿತ್ತು. ಸುಧಾರಣಾವಾದಿಗಳು ಶರಣಾಗಬೇಕಾಯಿತು. ನಾಕ್ಸನನ್ನೂ ಇವನ ಅನುಯಾಯಿಗಳನ್ನೂ ಸೆರೆಹಿಡಿದು ಗುಲಾಮರನ್ನಾಗಿ ಅವರು ದುಡಿಸಿಕೊಳ್ಳತೊಡಗಿದರು. 19 ತಿಂಗಳುಗಳ ಅನಂತರ ಇಂಗ್ಲೆಂಡು ಪ್ರವೇಶಿಸಿದಾಗ ಇವರನ್ನು ಬಿಡಬೇಕಾಯಿತು. ಆ ವೇಳೆಗೆ ನಾಕ್ಸನ ಆರೋಗ್ಯ ಮತ್ತೆ ಚೇತರಿಸಿಕೊಳ್ಳದ ಮಟ್ಟಿಗೆ ಕೆಟ್ಟುಹೋಗಿತ್ತು.

  	ಇಂಗ್ಲೆಂಡಿನಲ್ಲಿ ಆಗ 6ನೆಯ ಎಡ್ವರ್ಡ್ ದೊರೆ ಆಳುತ್ತಿದ್ದ. ಧಾರ್ಮಿಕ ಸುಧಾರಣೆಗಳನ್ನು ಆದಷ್ಟು ಜಾಗ್ರತೆಯಾಗಿ ತರಲು ಇವನು ಪುರೋಹಿತ ವರ್ಗಕ್ಕೆ ಎಲ್ಲ ಪ್ರೋತ್ಸಾಹ ನೀಡುತ್ತಿದ್ದ. ನಾಕ್ಸ್ ಸ್ಕಾಟ್ಲೆಂಡಿಗೆ ಹೋಗುವಂತಿರಲಿಲ್ಲ. ಇಂಗ್ಲೆಂಡಿನ ಸರ್ಕಾರ ಇವನನ್ನು ಧರ್ಮೋಪದೇಶಕನಾಗಿ ನೇಮಿಸಿತು. ಪ್ರಾಟೆಸ್ಟಂಟ್ ವಲಯಗಳಲ್ಲಿ ಈತ ಪ್ರಮುಖ ವ್ಯಕ್ತಿಯಾಗಿದ್ದ.
 
 	1553ರಲ್ಲಿ ಟ್ಯೂಡರ್ ಮೇರಿ ಇಂಗ್ಲೆಂಡಿನ ರಾಣಿಯಾದಳು. ಆಕೆ ಕ್ಯಾತೊಲಿಕಳು. ತನ್ನ ಪ್ರಜೆಗಳೆಲ್ಲ ಕ್ಯಾತೊಲಿಕ್ ಧರ್ಮವನ್ನೇ ಅನುಸರಿಸುವಂತಾಗಬೇಕೆಂದು ಅವಳು ಪ್ರಯತ್ನಿಸಿದಳು. ಅವಳ ಕಿರುಕುಳ ತಡೆಯಲಾಗದೆ ಪ್ರಾಟೆಸ್ಟಂಟ್ ನಾಯಕರೆಲ್ಲ ಇಂಗ್ಲೆಂಡಿನಿಂದ ಓಡಿಹೋದರು. ಅವರ ಪೈಕಿ ಕೊನೆಯಲ್ಲಿ ಹೋದವನು ನಾಕ್ಸ್. ಒಂದು ಹೆಣ್ಣು ತನ್ನ ಧಾರ್ಮಿಕ ಭಾವನೆಗಳನ್ನು ದೇಶದ ಎಲ್ಲರ ಮೇಲೂ ಹೇರುವುದನ್ನು ಕಂಡು ಇವನು ಕುಪಿತನಾದ. ಇದನ್ನು ಬಲಪ್ರಯೋಗದಿಂದಲಾದರೂ ಎಲ್ಲರೂ ವಿರೋಧಿಸಬೇಕೆಂದು ಈತ ಬರೆದ. ಇವನ ಬರೆಹ ಇಂಗ್ಲೆಂಡಿನ ರಾಣಿಯನ್ನು ಇನ್ನೂ ಕೆರಳಿಸಿತು. ಪ್ರಾಟೆಸ್ಟಂಟರ ಚಿತ್ರಹಿಂಸೆ ಅತಿಯಾಯಿತು. ಇದಕ್ಕೆ ನಾಕ್ಸನ ಬರೆಹವೂ ಕಾರಣವೆಂದು ಇಂಗ್ಲೆಂಡಿನಲ್ಲಿ ಹಲವರು ನಾಕ್ಸನ ಬಗ್ಗೆ ದ್ವೇಷಭಾವ ತಳೆದರು. ಸ್ಕಾಟ್ಲೆಂಡಿನ ಪ್ರಾಟೆಸ್ಟಂಟರಿಗೆ ಪ್ರೋತ್ಸಾಹ ನೀಡುವ ಸಂದೇಶಗಳನ್ನು ನಾಕ್ಸ್ ಕಳುಹಿಸುತ್ತಲೇ ಇದ್ದ.

  	ಆಗ ಇಂಗ್ಲೆಂಡ್, ಫ್ರಾನ್ಸ್, ಸ್ಕಾಟ್ಲೆಂಡ್ ಮೂರೂ ದೇಶಗಳಲ್ಲೂ ಸ್ತ್ರೀಯರ ಆಳ್ವಿಕೆಯಿತ್ತು. ಹೆಂಗಸರ ಅಧಿಕಾರ ನೈಜ ನ್ಯಾಯಕ್ಕೂ ಧರ್ಮಕ್ಕೂ ವಿರುದ್ಧವೆಂದು ಈತ ಬರೆದ. ಇವನ ದುರದೃಷ್ಟಕ್ಕೆ ಇವನ ಲೇಖನ ಪ್ರಕಟವಾಗುವ ವೇಳೆಗೆ ಸರಿಯಾಗಿ ಇಂಗ್ಲೆಂಡಿನಲ್ಲಿ 1ನೆಯ ಎಲಿಜóಬೆತ್‍ಳ ಆಳ್ವಿಕೆ ಆರಂಭವಾಗಿತ್ತು. ಅವಳು ಪ್ರಾಟೆಸ್ಟಂಟಳಾದರೂ ನಾಕ್ಸನ ಸ್ತ್ರೀದ್ವೇಷದಿಂದ ಅವಳಿಗೆ ಕ್ರೋಧ ಬಂತು. ಇವನು ಎಂದೆಂದೂ ತನ್ನ ರಾಜ್ಯದೊಳಕ್ಕೆ ಬರಕೂಡದೆಂದು ಆಕೆ ನಿಷೇಧಿಸಿದಳು.

  	ಅಂತಿಮವಾಗಿ ಸ್ಕಾಟ್ಲೆಂಡಿನಲ್ಲೂ ಪ್ರಾಟೆಸ್ಟಂಟರು ವಿಜಯ ಗಳಿಸಿದರು. ರೋಮನ್ ಕ್ಯಾತೊಲಿಕ್ ಆಡಳಿತದ ಪರವಾಗಿ ಪ್ರವೇಶಿಸಿದ ಫ್ರೆಂಚ್ ಸೇನೆಯನ್ನು ಎದುರಿಸಲು ಇಂಗ್ಲೆಂಡಿನ ಎಲಿಜಬೆತ್ ಅಲ್ಲಿಗೆ ಸೈನ್ಯ ಕಳುಹಿಸಿದಳು. ಫ್ರೆಂಚರು ಹಿನ್ನೆಡೆದರು. ಇಂಗ್ಲೆಂಡೂ ಕೂಡ ತನ್ನ ಸೈನ್ಯವನ್ನು ಹಿಂದೆಗೆದುಕೊಂಡಿತು. ನಾಕ್ಸ್ ಸ್ಕಾಟ್ಲೆಂಡಿಗೆ ಹಿಂದಿರುಗಿದ.

  	ಸ್ಕಾಟ್ಲೆಂಡಿನ ಸುಧಾರಿತ ಚರ್ಚಿಗೆ ನಾಕ್ಸ್ ಅನೇಕ ಸೂತ್ರಗಳನ್ನು ರಚಿಸಿದ. ಆದರೆ ಅವನ್ನು ಜಾರಿಗೆ ಕೊಡಲು ಅಗತ್ಯವಾದ ಹಣ ಚರ್ಚಿಗೆ ಇರಲಿಲ್ಲ. 1561ರಲ್ಲಿ ಸ್ಕಾಟ್ಲೆಂಡಿನ ರಾಣಿಯಾದ ಮೇರಿಗೂ ನಾಕ್ಸನಿಗೂ ವಿರಸ ಬೆಳೆಯಿತು. ನಾಕ್ಸ್ ಹಾಗೂ ತಾನು-ಇಬ್ಬರೂ ಸ್ಕಾಟ್ಲೆಂಡಿನಲ್ಲಿರುವುದು ಸಾಧ್ಯವಿಲ್ಲವೆಂಬುದು ಮೇರಿಯ ತೀರ್ಮಾನವಾಗಿತ್ತು. ಆದರೆ 1564ರ ವೇಳೆಗೆ ಮೇರಿಯ ಆಳ್ವಿಕೆ ಅತಿರೇಕಕ್ಕೆ ಹೋಯಿತು. ಅವಳ ನಿರಕುಂಶ ಪ್ರಭುತ್ವದ ಕೊನೆದಿನಗಳು ಬಳಿ ಸಾರುತ್ತಿದ್ದವು. 1567ರಲ್ಲಿ ಆಕೆ ಸಿಂಹಾಸನತ್ಯಾಗ ಮಾಡಬೇಕಾಯಿತು. ಹೊಸ ಆಳ್ವಿಕೆಯಲ್ಲಿ ಸುಧಾರಿತ ಚರ್ಚಿಗೆ ಪ್ರೋತ್ಸಾಹ ದೊರಕಿತು. ಆದರೆ ರಾಣಿಯ ಪರವಾಗಿದ್ದವರಿಗೂ ಹೊಸ ಆಳ್ವಿಕೆಯ ಬೆಂಬಲಿಗರಿಗೂ ನಡುವೆ ಘರ್ಷಣೆ ತೀವ್ರವಾಗಿತ್ತು. ನಾಕ್ಸ್ ಬಯಸಿದ ಶಾಂತಿಯುತ ಪುನರ್ನಿರ್ಮಾಣದ ಕನಸು ನನಸಾಗಿರಲಿಲ್ಲ. ಇವನಿಗೆ ಪಾಶ್ರ್ವವಾಯು ಬಡಿಯಿತು. ಎಡಿನ್‍ಬರೊದಲ್ಲಿ ಎರಡೂ ಪಕ್ಷಗಳ ನಡುವೆ ಹೋರಾಟ ನಡೆಯುತ್ತಿದ್ದಾಗ (1571) ಇವನನ್ನು ಸೇಂಟ್ ಆಂಡ್ರ್ಯೂಸ್‍ಗೆ ಸಾಗಿಸಲಾಯಿತು. ಮರುವರ್ಷ ಇವನು ಎಡಿನ್‍ಬರೋಗೆ ಹಿಂದಿರುಗಿದ. ಸೇಂಟ್ ಬಾರ್ತೋಲೋಮ್ಯೂ ದಿನದ ಕಗ್ಗೊಲೆಯ ಸುದ್ದಿ ತಲುಪಿದಾಗ ಇವನು ಸೇಂಟ್ ಗೈಲ್ಸ್ ಚರ್ಚಿನ ವೇದಿಕೆಯೇರಿ, ಈ ದುರಂತದಿಂದ ಕಲಿಯಬೇಕಾದ ಪಾಠವನ್ನು ಅತ್ಯಂತ ವೇದನೆಯಿಂದ ವರ್ಣಿಸಿದ. 1572ರ ನವೆಂಬರ್ 24ರಂದು ಜಾನ್ ನಾಕ್ಸ್ ಕೊನೆಯುಸಿರು ಎಳೆದ.

   	ಜಾನ್ ನಾಕ್ಸ್ ವಾದಗ್ರಸ್ತ ವ್ಯಕ್ತಿ. ಆದರೆ ಧರ್ಮಸುಧಾರಣೆಯಾಗಬೇಕೆಂಬುದು ದೈವಸಂಕಲ್ಪವೆಂದೂ ಅದು ಆಗಿಯೇ ತೀರುವುದೆಂದೂ ಈತ ನಂಬಿ ಅದಕ್ಕಾಗಿ ದುಡಿದ. ಈತನ ಮಾತು ಕಟು. ಆದರೆ ಕೃತಿಯಲ್ಲಿ ಇವನು ತುಂಬ ಮೃದು. ಬುದ್ಧಿ ಹೃದಯಗಳೆರಡೂ ಇವನಲ್ಲಿ ಹದವಾಗಿ ಬೆರೆತಿದ್ದವು. ನಾಕ್ಸ್ ನೈತಿಕ ಭ್ರಷ್ಟನೆಂದು ಅನಂತರದ ಕೆಲವು ರೋಮನ್ ಕ್ಯಾತೊಲಿಕ್ ಲೇಖಕರು ಹೇಳಿದರಾದರೂ ಆ ವಾದಕ್ಕೆ ಆಧಾರ ಸಿಕ್ಕುವುದಿಲ್ಲ. ಸ್ಕಾಟ್ಲೆಂಡಿನ ಧರ್ಮ ಸುಧಾರಣಾ ಚಳವಳಿಯ ಇತಿಹಾಸವನ್ನು ಕುರಿತು ಇವನು ಗ್ರಂಥವೊಂದನ್ನು ರಚಿಸಿದ್ದಾನೆ.								

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ